ಎಕಿಡ್ನೊಪ್‍ಸಿಸ್

	ಎಲೆಗಳಿಲ್ಲದೆ ಬೆಳೆಯುವ ಸುಂದರವಾದ ಕಳ್ಳಿಯ ಒಂದು ಜಾತಿ. ಆಸ್‍ಕ್ಲೆಪಿಯಡೇಸಿ ಕುಟುಂಬಕ್ಕೆ ಸೇರಿದೆ. ಈ ಸಸ್ಯಗಳು ಸರ್ಪಗಳಂತೆ ಬೆಳೆಯುವುದರಿಂದ ಎಕಿಡ್ನೊಪ್‍ಸಿಸ್ ಎಂದು ಹೆಸರು ಬಂದಿದೆ. ಇದರ ಕಾಂಡ ಹಲವು ಕೋನಗಳಿಂದ ಕೂಡಿದ್ದು ನುಲಿದುಕೊಂಡಿರುತ್ತದೆ. ಗಿಣ್ಣುಗಳಲ್ಲಿ ಗಂಟುಗಳು (ಟ್ಯುಬರ್‍ಕಲ್ಸ್ಸ್) ಇರುತ್ತವೆ. ಕೋನಗಳ ಉಬ್ಬುಗಳ ಮೇಲೆ ಮೊಂಡಾದ ಅಥವಾ ಮೊನಚಾದ ಮುಳ್ಳುಗಳಿರುತ್ತವೆ. ಹೂವು ಚಕ್ರಾಕಾರ. ಐದು ಕೂಡುಭಾಗಗಳಿವೆ. ಮೆದುವಾಗಿವೆ; ಹಳದಿ, ನಸುಗೆಂಪು ಅಥವಾ ಕಂದುಬಣ್ಣದ್ದಾಗಿರುತ್ತದೆ. ಈ ಜಾತಿಯ ಸಸ್ಯಗಳು ಅರೇಬಿಯ, ಆಫ್ರಿಕದ ಉಷ್ಣವಲಯ ಭಾಗಗಳ ಮೂಲವಾಸಿಗಳು.

	ಎ. ಸೆರೆಯಿಪೊರ್‍ಮಿಸ್ ಎಂಬ ಪ್ರಭೇದ ಸುಮಾರು 12' ಎತ್ತರ ಬೆಳೆಯುತ್ತದೆ; ಇದರ ಕಾಂಡಕ್ಕೆ ಎಂಟು ಕೋನಗಳಿರುತ್ತವೆ. ಪ್ರತಿ ಕೋನ ಮೊಂಡಾಗಿರುವ ಉಬ್ಬಿನ ಮೇಲೆ ಬಿಳಿಯ ಸಾಲುಚುಕ್ಕೆಗಳೂ ಅಲ್ಲಲ್ಲಿ ಗಂಟುಗಳೂ ಇರುತ್ತವೆ. ಕಾಂಡ ತುದಿಯಲ್ಲಿ ಹೂ ಬಿಟ್ಟಿರುತ್ತದೆ. ಹೊರಭಾಗ ಕಂದುಬಣ್ಣ, ಒಳಭಾಗ ಹಳದಿ ಬಣ್ಣ.

	ಎ. ಡಮ್ಮಾನಿಯಾನ ಎಂಬುದು ಈ ಜಾತಿಯ ಇನ್ನೊಂದು ಪ್ರಭೇದ. ಇದರ ವಿವರಣೆ ಮೇಲಿನ ಪ್ರಭೇದದಂತೆಯೇ. ಆದರೆ ಇದರ ಹೂಗಳು ನಸುಗೆಂಪು ಮತ್ತು ಕಂದುಮಿಶ್ರಿತ ಬಣ್ಣದ್ದಾಗಿರುತ್ತವೆ. 

	ಎ. ಬೆಂಟೈ: ಈ ಪ್ರಭೇದ 7'-8' ಎತ್ತರ ಬೆಳೆದು ಪಕ್ಕಕ್ಕೆ ರೆಂಬೆಗಳನ್ನು ಕೊಡುತ್ತದೆ. ರೆಂಬೆಗಳು ತುದಿಯಲ್ಲಿ ಜೋಡಿ ನಸುಗೆಂಪು ಹೂಗಳನ್ನು ಬಿಡುತ್ತವೆ. 

	ಎ. ಸೋಮಾಲೆನ್‍ಸಿಸ್: ಈ ಪ್ರಭೇದ ಸೋಮಾಲಿ ದೇಶದ ಮೂಲವಾಸಿ. ಕಾಂಡ ಕಾಲುವೆಗಳಿಂದ ಕೂಡಿರುತ್ತದೆ. ಇದು ತೊಟ್ಟಿಲ್ಲದ ಅತಿ ನಸುಗೆಂಪು ಬಣ್ಣದ ಮತ್ತು ಹಳದಿ ಚುಕ್ಕೆಗಳಿರುವ ಹೂಗಳನ್ನು ಬಿಡುತ್ತದೆ.
(ನೋಡಿ- ಕಳ್ಳಿ)									
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ